ಮೇರಿಲ್ಯಾಂಡ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ.  ಬ್ರಿಟಿಷರ ವಿರುದ್ಧ ಹೋರಾಡಿ ಒಕ್ಕೂಟವನ್ನೇರ್ಪಡಿಸಿಕೊಂಡ ಮೊದಲ 13 ರಾಜ್ಯಗಳಲ್ಲಿ ಮೇರಿಲ್ಯಾಂಡ್ ಸಹ ಸೇರಿದೆ.  ಅಟ್ಲಾಂಟಿಕ್ ಸಾಗರದ ತೀರದಲ್ಲಿ ಚೆಸ್‍ಪೀಕ್ ಕೊಲ್ಲಿಯ ಎರಡೂ ಕಡೆ ಹಬ್ಬಿರುವ ಈ ರಾಜ್ಯ ಉತ್ತರ ಅಕ್ಷಾಂಶ 37053' ರಿಂದ 39043'; ಪಶ್ಚಿಮ ರೇಖಾಂಶ 7504'ರಿಂದ 79029' ನಡುವೆ ಇದೆ. ಉತ್ತರದಲ್ಲಿ ಪೆನ್ಸಿಲ್ವೇನಿಯ, ಪೂರ್ವದಲ್ಲಿ ಡೆಲವೇರ್, ಅಟ್ಲಾಂಟಿಕ್ ಸಾಗರ ಮತ್ತು ವರ್ಜೀನಿಯದ ಸ್ವಲ್ಪಭಾಗ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ, ಫೋಟೋಮ್ಯಾಕ್ ನದಿ ಹಾಗೂ ಪಶ್ಚಿಮ ವರ್ಜೀನಿಯ ಇವು ಇದರ ಮೇರೆಗಳು.  ರಾಜ್ಯದೊಳಗಿನ ಜಲಾವೃತ ಭಾಗ 1,777 ಚ.ಕಿ.ಮೀ ಸೇರಿ ಇದರ ವಿಸ್ತೀರ್ಣ 27,094 ಚ.ಕಿ.ಮೀ. ಚೆಸ್‍ಪೀಕ್ ಕೊಲ್ಲಿಯ 4,470 ಚ.ಕಿ.ಮೀ ಜಲಾವೃತ ಭಾಗ ಇದರಲ್ಲಿ ಸೇರಿಲ್ಲ.  ಜನಸಂಖ್ಯೆ 47,81,469 (1990), ವಿಸ್ತೀರ್ಣದಲ್ಲಿ ಒಕ್ಕೂಟದ ರಾಜ್ಯಗಳ ಪೈಕಿ 42 ನೆಯದು ಹಾಗೂ ಜನಸಂಖ್ಯೆಯಲ್ಲಿ 21ನೆಯದು.  ರಾಜಧಾನಿ ಅನಾಪೊಲಿಸ್.

ಭೌತ ಲಕ್ಷಣ:  ಮೇರಿಲ್ಯಾಂಡ್ ವೈವಿಧ್ಯಮಯ ಭೂಲಕ್ಷಣಗಳಿಂದ ಕೂಡಿದೆ. ಇಲ್ಲಿಯ ಪ್ರಮುಖ ಭೂಭಾಗಗಳೆಂದರೆ ಅಟ್ಲಾಂಟಿಕ್ ತೀರದ ಬಯಲು ಪ್ರದೇಶ, ಬ್ಲೂರಿಡ್ಸ್, ಅಪಲೇಷಿಯನ್ ಪರ್ವತಪಂಕ್ತಿಗಳು ಹಾಗೂ ಅಪಲೇಷಿಯನ್ ಪ್ರಸ್ಥಭೂಮಿ. ಚೆಸ್‍ಪೀಕ್ ಕೊಲ್ಲಿ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸಿದೆ.  ಪೂರ್ವಭಾಗ ಕೆಳಮಟ್ಟದ ಸಮತಲವಾದ ಬಯಲು ಪ್ರದೇಶವಾಗಿದ್ದು ಉತ್ತರಕ್ಕೆ ಹೋದಂತೆಲ್ಲ ಎತ್ತರವಾಗುತ್ತದೆ.  ಪಶ್ಚಿಮ ಭಾಗಗಳಲ್ಲಿ ಸ್ವಲ್ಪವಾಗಿ ಮಾತ್ರ ಸಮತಲ ಪ್ರದೇಶವಿದ್ದು ಉಳಿದ ಭಾಗ ಬೆಟ್ಟಗುಡ್ಡಗಳು, ಕಣಿವೆಗಳು ಹಾಗೂ ಪ್ರಸ್ಥಭೂಮಿಗಳಿಂದ ಕೂಡಿದೆ.  ಇಲ್ಲಿಯ ನದಿಗಳಲ್ಲಿ ಬಹುಪಾಲು ಚೆಸ್‍ಪೀಕ್ ಕೊಲ್ಲಿಯನ್ನು ಸೇರುತ್ತವೆ.  ರಾಜ್ಯದ ಮುಖ್ಯ ನದಿಗಳೆಂದರೆ ಚೆಸ್ಟರ್, ಚಾಪ್ಟ್ಯಾಂಕ್, ಎಲ್ಕ್ ನಾಂಟಿಕೋಕ್, ಪ್ಯಾಟುಕ್ಸೆಂಟ್ ಹಾಗೂ ಪೋಟೊಮ್ಯಾಕ್. ಇಲ್ಲಿಯ ಮಾನವ ನಿರ್ಮಿತ ಸರೋವರಗಳಲ್ಲಿ ಯಾಕ್‍ಗೆನೀ ನದಿಯ ಉಪನದಿಯೊಂದಕ್ಕೆ ಕಟ್ಟಿರುವ ಅಣೆಕಟ್ಟಿನಿಂದ ಉಂಟಾಗಿರುವ ಡೀಪ್‍ಕ್ರೀಕ್ ಸರೋವರ ಅತ್ಯಂತ ದೊಡ್ಡದು.  ಸುಮಾರು 1600 ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಈ ಸರೋವರವನ್ನು ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲಾಗಿದೆ.  

ಹವಾಗುಣ:  ಅಟ್ಲಾಂಟಿಕ್ ಸಾಗರ, ಚೆಸ್‍ಪೀಕ್ ಕೊಲ್ಲಿ ಹಾಗೂ ಅಪಲೇಷಿಯನ್ ಪರ್ವತಗಳ ಪ್ರಭಾವಕ್ಕೆ ಇಲ್ಲಿಯ ಹವಾಗುಣ ಒಳಪಟ್ಟಿದೆ.  ಹವೆ ಆದ್ರ್ರವಾಗಿದ್ದು ಬೇಸಿಗೆಯಲ್ಲಿ ಸೆಕೆ ಹೆಚ್ಚಾಗಿಯೂ ಚಳಿಗಾಲ ಸೌಮ್ಯವಾಗಿಯೂ ಇರುತ್ತದೆ.  ವಾರ್ಷಿಕ ಸರಾಸರಿ ಮಳೆ 112 ಸೆಂ ಮೀ. ರಾಜ್ಯದಲ್ಲೆಡೆ ಬಹು ಮಟ್ಟಿಗೆ ಬೀಳುತ್ತದೆ.  

ಸಸ್ಯ ಮತ್ತು ಪ್ರಾಣಿ ಜೀವನ : ರಾಜ್ಯದಲ್ಲಿ ಅರಣ್ಯಸಂಪತ್ತು ಹೇರಳವಾಗಿದ್ದು ಒಟ್ಟು ವಿಸ್ತೀರ್ಣದ ಶೇ. 40 ರಷ್ಟು ಅಂದರೆ ಸುಮಾರು 10,90,000 ಹೆಕ್ಟೇರ್ ಅರಣ್ಯವಿದೆ.  ಇಲ್ಲಿಯ ಮರಗಳಲ್ಲಿ ಪ್ರಮುಖವಾದವು ಓಕ್, ಬೀಚ್, ಪಾಪ್ಲರ್, ಲೀಕಸ್ಟ್, ಎಲ್ಮ್, ಹಿಕರಿ, ಸ್ಟ್ರೂಸ್, ಹೆಮ್‍ಲಾಕ್, ಪೈನ್ ಇತ್ಯಾದಿ. ಇಲ್ಲಿ ಕಾಣಸಿಗುವ ವನ್ಯ ಜೀವಿಗಳು ಬಾಬ್ ಕ್ಯಾಟ್, ಕರಡಿ, ಜಿಂಕೆ, ನರಿ, ಮೊಲ ಇತ್ಯಾದಿ. ಚೆಸ್‍ಪೀಕ್ ಪ್ರದೇಶಗಳಲ್ಲಿ ವಿವಿಧ ಜಾತಿಯ ಕಾಡುಬಾತುಗಳು ಇವೆ.  ಸಾಂಗ್ ಬರ್ಡ್, ಹದ್ದು, ಗೂಬೆ ಇತರ ಪಕ್ಷಿಗಳು. ಅಟ್ಲಾಂಟಿಕ ತೀರ ಹಾಗೂ ಚೆಸ್‍ಪೀಕ್ ಕೊಲ್ಲಿಯಲ್ಲಿ 2000 ಕ್ಕೂ ಹೆಚ್ಚು ಜಾತಿಯ ಮೀನುಗಳನ್ನು ನೋಡಬಹುದು.  ಇಲ್ಲಿಯ ಆಯ್‍ಸ್ಟರ್ ಮತ್ತು ಏಡಿಗಳು ಜನಪ್ರಿಯವಾದವು.  

ಆರ್ಥಿಕತೆ: ಅರಣ್ಯಗಳನ್ನು ಬಿಟ್ಟು ಮೇರಿಲ್ಯಾಂಡ್‍ನ ಇತರ ಭಾಗಗಳು ಫಲವತ್ತಾಗಿ ವ್ಯವಸಾಯ ಯೋಗ್ಯವಾಗಿವೆ. ಕೃಷಿಯನ್ನು ಅವಲಂಬಿಸಿರುವವರ ಸಂಖ್ಯೆ ಶೇ. 3 ರಷ್ಟು ಅನುಕೂಲ ಹವಾಗುಣ, ಉತ್ತಮ ಸಾರಿಗೆ ವ್ಯವಸ್ಥೆ ಹಾಗೂ ಮಾರುಕಟ್ಟೆ ಸೌಲಭ್ಯಗಳ ಸಾಮೀಪ್ಯ ಮತ್ತು ಮೇರಿಲ್ಯಾಂಡ್ ವಿಶ್ವ ವಿದ್ಯಾಲಯ ಕೃಷಿ ವಿಭಾಗದ ಸಮರ್ಥ ಮಾರ್ಗದರ್ಶನ ಇಲ್ಲಿಯ ವ್ಯವಸಾಯಕ್ಕೆ ಹೆಚ್ಚು ಉತ್ತೇಜನ ನೀಡಿದೆ.  ರಾಜ್ಯದ ದಕ್ಷಿಣಭಾಗದ ಮುಖ್ಯ ಬೆಳೆ ಹೊಗೆಸೊಪ್ಪು, ಇತರ ಬೆಳೆಗಳು ಗೋದಿ, ಓಟ್ಸ್, ಬಾರ್ಲಿ, ರೈ ಮುಂತಾದವು. ಪಶುಪಾಲನೆ ಹಾಗೂ ಹೈನುಗಾರಿಕೆ ಇಲ್ಲಿಯ ಪ್ರಮುಖ ಉದ್ಯಮಗಳಲ್ಲೊಂದು.  ಕೋಳಿ ಸಾಕಣೆ ಮತ್ತು ಮೀನುಗಾರಿಕೆ ಇಲ್ಲಿಯ ಲಾಭದಾಯಕ ಉದ್ಯಮ.  ಆಯ್‍ಸ್ಟರ್ ಉತ್ಪಾದನೆಯಲ್ಲಿ ಮೇರಿಲ್ಯಾಂಡ್ ಅಮೆರಿಕಾದಲ್ಲೇ ಪ್ರಥಮ.

ಕೈಗಾರಿಕೆ: ರಾಜ್ಯದ ಎಲ್ಲೆಡೆ ಕೈಗಾರಿಕೆಗಳು ಹರಡಿದ್ದರೂ ಬಾಲ್ಟಿಮೋರ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ.  ಪೂರ್ವ ತೀರಪ್ರದೇಶದಲ್ಲಿ ತರಕಾರಿ, ಕೋಳಿ ಮತ್ತು ಮೀನು ಸಂಸ್ಕರಣದ ಕೈಗಾರಿಕೆಗಳಿವೆ. ಈ ರಾಜ್ಯದ ಪ್ರಮುಖ ಕೈಗಾರಿಕೆಗಳು ಹಡಗುಗಳ ತಯಾರಿಕೆ, ಮೂಲಲೋಹಗಳು ಸಾರಿಗೆ ಉಪಕರಣಗಳು, ಆಹಾರ ಸಂಸ್ಕರಣ, ರಾಸಾಯನಿಕ ವಸ್ತುಗಳು, ಯಂತ್ರೋಪಕರಣಗಳು, ಉಡುಪುಗಳು, ಮರದ ಸಾಮಾನುಗಳು, ಕಾಗದ, ಮುದ್ರಣ ಮತ್ತು ಪ್ರಕಾಶನ, ಬಾಲ್ಟಿಮೋರ್‍ನ ಹೊರವಲಯದಲ್ಲಿರುವ ಬೆತ್ಲೆಹೇಮ್ ಸ್ಟೀಲ್ ಕಾರ್ಪೊರೇಷನ್ ವಿಶ್ವದ ಅತ್ಯಂತ ದೊಡ್ಡ ಉಕ್ಕಿನ ಕಾರ್ಖಾನೆಗಳಲ್ಲೊಂದಾಗಿದೆ. ಇಲ್ಲಿಯ ಗಣಿಗಳಿಂದ ಗ್ರಾನೈಟ್, ಸುಣ್ಣದ ಕಲ್ಲು, ಜೇಡಿಮಣ್ಣು, ಕಲ್ಲಿದ್ದಲು, ಪ್ರಾಕೃತಿಕ ಅನಿಲಗಳನ್ನು ತೆಗೆಯಲಾಗುತ್ತದೆ.
ಆಡಳಿತ : ಮೇರಿಲ್ಯಾಂಡ್‍ನ ಈಗಿನ ಸಂವಿಧಾನ 1867ರಲ್ಲಿ ಅಂಗೀಕೃತವಾದದ್ದು. ರಾಜ್ಯದ ಆಡಳಿತ ಪ್ರಮುಖ ಚುನಾಯಿತ ಗವರ್ನರ್. ನಾಲ್ಕುವರ್ಷಗಳ ಅವಧಿ.  ಈತ ಎಷ್ಟು ಕಾಲ ಬೇಕಾದರೂ ಅಧಿಕಾರದಲ್ಲಿರಬಹುದಾದರೂ ಒಂದೇ ಬಾರಿಗೆ ಎರಡು ಅವಧಿಗಳಿಗಿಂತ ಹೆಚ್ಚುಕಾಲ ಅಧಿಕಾರದಲ್ಲಿರುವಂತಿಲ್ಲ.  ಲೆಫ್ಟಿನಂಟ್ ಗವರ್ನರ್, ಅಟಾರ್ನಿ ಜನರಲ್ ಮತ್ತು ಕಂಟ್ರೋಲರ್ ಸಹ ಜನರಿಂದ ನೇರವಾಗಿ ಚುನಾಯಿತರಾಗುತ್ತಾರೆ. ರಾಜ್ಯದ ಕಾರ್ಯದರ್ಶಿ ಅಡ್ಜುಟೆಂಟ್ ಜನರಲ್ ಮತ್ತು ಸ್ಟೇಟ್ ಬೋರ್ಡ್‍ಗಳ ಸದಸ್ಯರನ್ನು ಗವರ್ನರ್ ನೇಮಿಸುತ್ತಾನೆ.

ರಾಜ್ಯದಲ್ಲಿ ದ್ವಿಸದನಗಳ ವಿಧಾನ ಮಂಡಲವಿದೆ. ಮೇಲ್ಮನೆ ಸೆನೆಟ್ಟಿನ 47 ಸದಸ್ಯರು 4 ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ರಾಜ್ಯವನ್ನು 47 ಕ್ಷೇತ್ರಗಳಾಗಿ ವಿಂಗಡಿಸಿದ್ದು ಪ್ರತಿ ಕ್ಷೇತ್ರದಿಂದಲೂ ಒಬ್ಬ ಸೆನೆಟರ್ ಹಾಗೂ 3 ಜನ ಪ್ರತಿನಿಧಿಗಳು ಆರಿಸಲ್ಪಡುತ್ತಾರೆ. ಸ್ಥಳೀಯ ಆಡಳಿತಕ್ಕಾಗಿ ಮೇರಿಲ್ಯಾಂಡ್ ರಾಜ್ಯವನ್ನು 23 ಕೌಂಟಿಗಳನ್ನಾಗಿ ವಿಭಾಗಿಸಲಾಗಿದೆ. ಸಂಘಟಿತವಾದ ನಗರಗಳು ರಾಜ್ಯಸರ್ಕಾರದ ಅಧೀನದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸುತ್ತವೆ. ಇಲ್ಲಿ ಮೇಯರ್ ಅಥವಾ ಕಮಿಷನರ್ ಆಡಳಿತವಿರುತ್ತದೆ. 5/6ರಷ್ಟು ಜನ ಇಲ್ಲಿ  ನಗರವಾಸಿಗಳಾಗಿದ್ದಾರೆ. ಬಾಲ್ಟಿಮೋರ್ ರಾಜ್ಯದ ಅತ್ಯಂತ ದೊಡ್ಡ ಬಂದರು ನಗರ. ಇತರ ಪ್ರಮುಖ ನಗರಗಳು ಸಿಲ್ವರ್ ಸ್ಟ್ರಿಂಗ್, ಡಂಡಾಲ್ಕ್, ಬೆತೆಸ್ಡ, ಕೊಲಂಬಿಯ ಹಾಗೂ ಟೌಸನ್.
ಇತಿಹಾಸ: ಬಿಳಿಯರ ಆಗಮನಕ್ಕೆ ಮೊದಲು ಇಲ್ಲಿ ಅಲ್ಗೋನ್‍ಕಿಯನ್ ಇಂಡಿಯನ್ನರು ವಾಸಿಸುತ್ತಿದ್ದರು. ಚೆಸ್‍ಪಾಕ್ ಕೊಲ್ಲಿಯನ್ನು 15ನೆ ಶತಮಾನದಲ್ಲಿ ಸ್ಪೇನಿನವರು ಮೊದಲು ಪರಿಶೋಧಿಸಿದರು. ವರ್ಜಿನಿಯಾದ ಕ್ಯಾಪ್ಟನ್ ಜಾನ್‍ಸ್ಮಿತ್ 1608ರಲ್ಲಿ ಮೇರಿಲ್ಯಾಂಡ್ ಪ್ರದೇಶಕ್ಕೆ ಬಂದವರಲ್ಲಿ ಮೊದಲನೆಯವನು. 1631ರಲ್ಲಿ ವರ್ಜೀನಿಯದ ವಿಲಿಯಮ್ ಕ್ಲೈಬೋನ್ ಈ ಕೊಲ್ಲಿಯ ಕೆಂಟ್‍ದ್ವೀಪದಲ್ಲಿ ವ್ಯಾಪಾರಿ ಠಾಣೆಯನ್ನು ಸ್ಥಾಪಿಸಿದ. 1632ರಲ್ಲಿ ಇಂಗ್ಲೆಂಡಿನ ಮೊದಲನೆಯ ಚಾಲ್ರ್ಸ್ ದೊರೆ ಬಾಲ್ಟಿಮೋರ್‍ನ ಮೊದಲನೆಯ ಲಾರ್ಡ್ ಆದ ಜಾರ್ಜ್ ಕ್ಯಾಲ್ವರ್ಟನಿಗೆ ಈ ಪ್ರದೇಶದ ಸನ್ನದನ್ನು ನೀಡಿದ.  ಈ ದೊರೆಯ ರಾಣಿಯಾದ ಹೆನ್ರಿಯಟ್ಟ ಮೇರಿಯಳ ಹೆಸರಿನ ಮೇಲೆ ರಾಜ್ಯಕ್ಕೆ ಮೇರಿಲ್ಯಾಂಡ್ ಎಂದು ಹೆಸರು ಬಂತು. 1649ರಲ್ಲಿ ಈ ವಸಾಹತಿನ ಗವರ್ನರ್ ಲಿಯೊನಾರ್ಡ್ ಕ್ಯಾಲ್ವರ್ಟ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ ಶಾಸನ ಮಾಡಿದ.

18ನೆಯ ಶತಮಾನದ ಮಧ್ಯಭಾಗದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟಿನ ಕಾರಣ ಬ್ರಿಟಿಷ್ ಸರ್ಕಾರ ಭಾರಿ ತೆರಿಗೆಗಳನ್ನು ಮತ್ತು ವ್ಯಾಪಾರದ ಮೇಲೆ ನಿರ್ಬಂಧವನ್ನು ಹೇರಿತು. ಮೇರಿಲ್ಯಾಂಡ್ ಇತರ ವಸಾಹತುಗಳೊಡನೆ ಸೇರಿ ಇದನ್ನು ವಿರೋಧಿಸಿತು ಮತ್ತು ಟೀಸೊಟ್ಟನ್ನು ಸಾಗಿಸುತ್ತಿದ್ದ ಪೆಗ್ಗಿಸ್ಟುವರ್ಟ್ ಎಂಬ ಬ್ರಿಟಿಷ್ ಹಡಗನ್ನು ಸುಟ್ಟುಹಾಕಿತು. ಅನಂತರ ಸಮರದಲ್ಲಿ ಬ್ರಿಟಿಷರಿಗೆ ಸೋಲಾದ ಮೇಲೆ ಅಮೆರಿಕ ಸಂಯುಕ್ತಸಂಸ್ಥಾನ ಸ್ಥಾಪನೆಯಾಯಿತು. ಮೇರಿಲ್ಯಾಂಡ್ ಈ ಒಕ್ಕೂಟಕ್ಕೆ ಸೇರಿದ  ರಾಜ್ಯಗಳಲ್ಲಿ ಏಳನೆಯದು. 1791ರಲ್ಲಿ ಮೇರಿಲ್ಯಾಂಡ್ ಅಮೆರಿಕದ ಹೊಸ ರಾಜಧಾನಿ ಕಟ್ಟಲು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ ಪ್ರದೇಶವನ್ನು ಅಮೆರಿಕನ್ ಕಾಂಗ್ರೆಸ್ಸಿಗೆ ನೀಡಿತು.

ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಸ್ಥಾಪಿಸಿದ 13 ಮೂಲ ರಾಜ್ಯಗಳಲ್ಲಿ ಮೇರಿಲ್ಯಾಂಡ್ ಒಂದಾಗಿದ್ದರೂ ಇಲ್ಲಿ ಗುಲಾಮಗಿರಿ ಚಾಲ್ತಿಯಲ್ಲಿತ್ತು. 1861ರ ಅಂತರ್ಯುದ್ಧದ ಸಮಯದಲ್ಲಿ ಜನತೆ ಪರ ಮತ್ತು ವಿರೋಧದ ಎರಡು ಗುಂಪುಗಳಾಗಿತ್ತು. ಕೊನೆಗೆ ಮೇರಿಲ್ಯಾಂಡ್ ಸಂಯುಕ್ತಸಂಸ್ಥಾನಗಳೊಡನೆ ಸೇರಿ 1864ರಲ್ಲಿ ಗುಲಾಮಗಿರಿಯನ್ನು ರದ್ಧುಗೊಳಿಸಿತು.

20ನೆಯ ಶತಮಾನದಲ್ಲಿ ಮೇರಿಲ್ಯಾಂಡ್‍ನ ಕೈಗಾರಿಕೋದ್ಯಮದ ವ್ಯಾಪಕ ಅಭಿವೃದ್ಧಿಯಾಯಿತು. 1917ರಲ್ಲಿ ಅಮೆರಿಕ ಒಂದನೆಯ ಮಹಾಯುದ್ಧದಲ್ಲಿ ಸೇರಿದ ಅನಂತರ ಇಲ್ಲಿಯ ಕೈಗಾರಿಕೆಗಳು ಹಾಗೂ ಹಡಗುಕಟ್ಟೆಗಳು ಮತ್ತಷ್ಟು ಅಭಿವೃದ್ಧಿಯಾಗಿ ಈಗ ಮೇರಿಲ್ಯಾಂಡ್ ಅಮೆರಿಕದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲೊಂದಾಗಿದೆ. ಇದು ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಕೇಂದ್ರವಾಗಿದೆ. ಗ್ರೀನ್‍ಬೆಲ್ಟ್‍ನಲ್ಲಿರುವ ನಾಸಾದ ಗಾಡ್ಡಾರ್ಡ್ ಸ್ಪೇಸ್ ಸ್ಟಡಿ ಸೆಂಟರ್ ಬಾಹ್ಯಾಕಾಶ ಯೋಜನಾ ಕಾರ್ಯಕೇಂದ್ರ.

ಮೇರಿಲ್ಯಾಂಡ್ ಅಮೆರಿಕದ ಪ್ರವಾಸಿ ಆಕರ್ಷಕ ಕೇಂದ್ರಗಳಲ್ಲೊಂದು.  ರಾಜ್ಯದಲ್ಲಿ ಅನೇಕ ಪುರಾತನ ಕಟ್ಟಡಗಳೂ ಚರಿತ್ರಾರ್ಹಸ್ಥಳಗಳೂ ಇವೆ. 1814ರಲ್ಲಿ ಬಾಲ್ಟಿಮೋರ್‍ನಲ್ಲಿ ಸ್ಥಾಪಿಸಲಾದ ಪೀಲ್ ವಸ್ತುಸಂಗ್ರಹಾಲಯವಿದೆ. ಪ್ರವಾಸಿಗಳಿಗೆ ನೌಕಾಯಾನ, ಮೀನು ಹಿಡಿಯುವುದು, ಈಜುವುದು ಮತ್ತು ಬೇಟೆಗಳಿಗೆ ಇಲ್ಲಿ ಪ್ರಶಸ್ತ ಸ್ಥಳಗಳಿವೆ. 
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ